ಅಭಿನಂದನ್ ಅವರನ್ನು ಒಂದೇ ದಿನಕ್ಕೆ ರಿಲೀಸ್ ಮಾಡಿದ್ದರ ಹಿಂದಿನ ಬಿಗ್ ಸೀಕ್ರೆಟ್ ಬಿಚ್ಚಿಟ್ಟ ಮೋದಿ


ವಾಯುಪಡೆಯ ಪೈಲಟ್ ಅಭಿನಂದನ್ ವರ್ತಮಾನ್ ಸುರಕ್ಷಿತವಾಗಿ ಭಾರತಕ್ಕೆ ಮರಳದಿದ್ದರೆ ಪರಿಣಾಮ ಎದುರಿಸಲು ಸಿದ್ಧರಾಗಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುಜರಾತ್‌ನಲ್ಲಿ ಚುನಾವಣಾ ಪ್ರಚಾರ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ವಿಂಗ್ ಕಮಾಂಡರ್ ಅಭಿನಂದನ್‌ರನ್ನು ಪಾಕಿಸ್ತಾನದವರು ಬಂಧಿಸಿದ ನಂತರ ನಾವು ಪತ್ರಿಕಾಗೋಷ್ಠಿ ನಡೆಸಿ, ನಮ್ಮ ಪೈಲಟ್‌ಗೇನಾದರೂ ಆದರೆ ನಂತರ ನೀವು ‘ಮೋದಿ ನಮಗೆ ಹೀಗೆ ಮಾಡಿಬಿಟ್ಟರು’ ಎಂದು ಜಗತ್ತಿಗೆ ಹೇಳುತ್ತಿರಬೇಕಾಗುತ್ತದೆ ಎಂದು ಎಚ್ಚರ ನೀಡಿದ್ದೆವು.

ಮೋದಿ 12 ಕ್ಷಿಪಣಿಗಳನ್ನು ಪಾಕಿಸ್ತಾನದತ್ತ ಸಜ್ಜುಗೊಳಿಸಿ ನಿಲ್ಲಿಸಿ ದ್ದು, ಯಾವಾಗ ಬೇಕಾದರೂ ದಾಳಿ ನಡೆಸಬಹುದು, ಅದರಿಂದ ಪರಿಸ್ಥಿತಿ ಹದಗೆಡಲಿದೆ ಎಂದು ಎರಡನೇ ದಿನವೇ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು. ಹೀಗಾಗಿ ಪಾಕಿಸ್ತಾನ ಆವತ್ತೇ ಅಭಿನಂದನ್ ರನ್ನು ಬಿಡುಗಡೆಗೊಳಿಸುವುದಾಗಿ ಹೇಳಿತು.

ಇಲ್ಲದಿದ್ದರೆ ಅದು ‘ಹತ್ಯಾಕಾಂಡದ ರಾತ್ರಿ’ಯಾಗುತ್ತಿತ್ತು ಎಂದು ಮೋದಿ ಹೇಳಿದರು. ‘ಇದನ್ನು ಹೇಳಿದ್ದು ಅಮೆರಿಕ. ಈಗ ನಾನೇನೂ ಹೇಳಬೇಕಾಗಿಲ್ಲ. ಇವೆಲ್ಲದರ ಬಗ್ಗೆ ಸಮಯ ಬಂದಾಗ ಮಾತನಾಡುತ್ತೇನೆ. ನಾನು ಅಧಿಕಾರದಲ್ಲಿರಲಿ ಅಥವಾ ಇಲ್ಲದೇ ಇರಲಿ, ಒಂದು ನಿರ್ಧಾರಕ್ಕಂತೂ ಬಂದಿದ್ದೇನೆ. ಒಂದೋ ನರೇಂದ್ರ ಮೋದಿ ಉಳಿಯಬೇಕು ಇಲ್ಲಾ ಭಯೋತ್ಪಾದಕರು ಉಳಿಯಬೇಕು’ ಎಂದರು. ಫೆ.೨೭ರಂದು ಗಡಿ ನಿಯಂತ್ರಣ ರೇಖೆಯ ಭಾಗದಲ್ಲಿ ಭಾರತ- ಪಾಕಿಸ್ತಾನದ ವಾಯುಪಡೆಯ ವಿಮಾನಗಳ ನಡುವೆ ಚಕಮಕಿ ನಡೆದಿತ್ತು. ಭಾರತದ ಪೈಲಟ್ ಅಭಿನಂದನ್ ಅವರು ಪಾಕಿಸ್ತಾನದ ಎಫ್- 16  ಯುದ್ಧವಿಮಾನವನ್ನು ಹೊಡೆದುರುಳಿಸಿ, ನಂತರ ಪಾಕ್‌ನಲ್ಲಿ ಸೆರೆಯಾಗಿದ್ದರು.
60 ತಾಸುಗಳಲ್ಲಿ ಪಾಕ್ ಬಿಡುಗಡೆಗೊಳಿಸಿತ್ತು.

Comments