ಲೋಕಸಭಾ ಚುನಾವಣೆ ಬಳಿಕ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಬಿ.ಎಸ್​ ಯಡಿಯೂರಪ್ಪ ತ್ಯಜಿಸಲಿದ್ದಾರೆ ಎಂಬ ಸುದ್ದಿ ಹರದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ನೂತನ ಸಾರಥ್ಯಕ್ಕೆ ನಂಬಿಕಸ್ಥ ವ್ಯಕ್ತಿಯ ಹುಡುಕಾಟ ನಡೆಯುತ್ತಿದೆ ಎನ್ನಲಾಗಿದೆ. ಸದ್ಯ ಬಿ.ಎಸ್​ ಯಡಿಯೂರಪ್ಪ, ಹುಕ್ಕೇರಿ‌ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಅವರ ಪರಮಾಪ್ತ ಉಮೇಶ್ ಕತ್ತಿ ಪರ ಒಲವು ತೋರಿದ್ದಾರೆ ಎನ್ನಲಾಗಿದೆ. 2019ರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಉಮೇಶ್ ಕತ್ತಿ‌ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ಕೈ ತಪ್ಪಿತ್ತು.

ಈ ಹಿನ್ನೆಲೆ ಉಮೇಶ್ ಕತ್ತಿ ಬಂಡಾಯ ಬಾವುಟ ಹಾರಿಸಿದರು. ನಂತರ ಬಿ ಎಸ್ ಯಡಿಯೂರಪ್ಪ ಸಂಧಾನ ಸೂತ್ರದಿಂದ ಬಂಡಾಯಕ್ಕೆ ತೆರೆ ಬಿದ್ದಿತ್ತು. ಇದೀಗ ಕತ್ತಿ ಸಹೋದರರ ಮುನಿಸು ಶಮನಕ್ಕೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಬಿ ಎಸ್ ಯಡಿಯೂರಪ್ಪ ಪ್ಲ್ಯಾನ ನಡೆಸುತ್ತಿದ್ದಾರೆ.

ಒಂದು ವೇಳೆ ಉಮೇಶ ಕತ್ತಿ ರಾಜ್ಯಾಧ್ಯಕ್ಷ ರಾದರೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಅಸಮಾಧಾನ ಬಗೆಹರಿಯುತ್ತೆ ಅನ್ನೋದು ಬಿಎಸ್​ವೈ ಲೆಕ್ಕಾಚಾರ. ಅಲ್ಲದೇ, ಉಮೇಶ್ ಕತ್ತಿ ಉತ್ತರ ಕರ್ನಾಟಕ ಭಾಗದ, ವೀರಶೈವ ಲಿಂಗಾಯತ ಸಮಯದಾಯಕ್ಕೆ ಸೇರಿದ ನಾಯಕ.

ಜೊತೆಗೆ ಉಮೇಶ್ ಕತ್ತಿ ಯಾವುದೇ ಕೆಲಸವಾದ್ರೂ ಮುನ್ನುಗ್ಗಿ ನಿಭಾಯಿಸುವ ಸಾಮರ್ಥ್ಯವಿದೆ. ಆಗಾಗ ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕತೆಯ ಕೂಗು ಎತ್ತುತ್ತಾರೆ. ಒಂದು ವೇಳೆ, ಉಮೇಶ್ ಕತ್ತಿ ರಾಜ್ಯಾಧ್ಯಕ್ಷರಾದ್ರೆ, ಅವರ ಮೂಲಕ ಉತ್ತರ ಕರ್ನಾಟಕ ಭಾಗದ ಹಿಡಿತ ಮುಂದುವರೆಸಬಹುದು. ಜೊತೆಗೆ ತಮ್ಮ ಸಮುದಾಯದ ನಾಯಕನನ್ನೇ ಮುಂದುವರೆಸುವ ಮೂಲಕ ಸ್ವಜಾತಿ ಪ್ರೀತಿ ಮೆರೆಯಬಹುದೆಂಬ ಪ್ಲಾನ್ ಯಡಿಯೂರಪ್ಪರದ್ದಾಗಿದೆ​. ಹೀಗೆಲ್ಲಾ ತಂತ್ರ ಪ್ರತಿತಂತ್ರಗಳನ್ನು ರೂಪಿಸಿ ಪಕ್ಷದ ಸಾರಥಿಯನ್ನು ನೇಮಿಸಲು ಯಡಿಯೂರಪ್ಪ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Comments