ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಬಿಜೆಪಿಯ ಪ್ರಯತ್ನವನ್ನು ‘ಮಹಾ ವಿಕಾಸ ಅಘಾಡಿ’ ರಚಿಸುವ ಮೂಲಕ ನಿಷ್ಫಲಗೊಳಿಸುವಲ್ಲಿ ಸಫಲವಾಗಿರುವ ಶಿವಸೇನೆ ಕಣ್ಣು ಇದೀಗ ಬಿಜೆಪಿ ಆಳ್ವಿಕೆಯ ರಾಜ್ಯ ಗೋವಾ ಮೇಲೆ ಬಿದ್ದಿದೆ. ಗೋವಾದಲ್ಲಿ ಈ ಹಿಂದೆ ಬಿಜೆಪಿಯ ಮಿತ್ರಪಕ್ಷಗಳಾಗಿದ್ದ ಗೋವಾ ಫಾರ್ವರ್ಡ್ ಪಕ್ಷ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ಜತೆಗೂಡಿ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಹೆಬ್ಬಯಕೆಯನ್ನು ಶಿವಸೇನೆ ವ್ಯಕ್ತಪಡಿಸಿದೆ.
ಈ ಕುರಿತು ಹೇಳಿಕೆ ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವುತ್ ‘ಮಹಾರಾಷ್ಟ್ರದ ಬಳಿಕ ಈಗ ಗೋವಾ. ಬಳಿಕ ಇತರೆ ರಾಜ್ಯಗಳಿಗೂ ಹೋಗುತ್ತೇವೆ. ದೇಶದಲ್ಲಿ ಬಿಜೆಪಿಯೇತರ ರಾಜಕೀಯ ರಂಗ ಸೃಷ್ಟಿಸುತ್ತೇವೆ. ಗೋವಾ ಫಾರ್ವಡ್ ಪಕ್ಷದ ಮುಖ್ಯಸ್ಥ ವಿಜಯ್ ಸರ್ದೇಸಾಯಿ ಹಾಗೂ ಅವರ ಪಕ್ಷದ ಮೂವರು ಶಾಸಕರು ನಮ್ಮಲ್ಲಿಗೆ ಬಂದಿದ್ದಾರೆ. ಶಿವಸೇನೆ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆದಂತೆಯೇ ಗೋವಾದಲ್ಲಿ ಹೊಸ ರಾಜಕೀಯ ರಂಗ ರೂಪುಗೊಳ್ಳುತ್ತಿದೆ. ಜೊತೆಗೆ ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿರುವ ಕೆಲವು ಶಾಸಕರು ಶಿವಸೇನೆ ಜತೆ ಸಂಪರ್ಕದಲ್ಲಿದ್ದಾರೆ. ಶೀಘ್ರದಲ್ಲೇ ಗೋವಾದಲ್ಲೂ ಚಮತ್ಕಾರ ನಡೆಯಲಿದೆ’ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಬಹುಮತ ಸಾಬೀತು, ಉದ್ಧವ್‌ಗೆ ಇಂದು ಮೊದಲ ಅಗ್ನಿಪರೀಕ್ಷೆ!
ಅವರ ಈ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಎಂಜಿಪಿ ಮುಖ್ಯಸ್ಥ ಸುದಿನ್ ಧವಳೀಕರ್ ಇಂಥ ಮೈತ್ರಿಯ ಎಲ್ಲಾ ಅವಕಾಶಗಳಿವೆ ಎನ್ನುವ ಮೂಲಕ ಹೊಸ ಮೈತ್ರಿಯ ಸುಳಿವು ನೀಡಿದ್ದಾರೆ. ಅಲ್ಲದೆ 2022ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎಂಜಿಪಿ, ಜಿಎಫ್‌ಪಿ, ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿಕೂಟ ರಚಿಸಿ ಚುನಾವಣಾ ಕಣಕ್ಕೆ ಇಳಿಯಬಹುದು ಎಂದು ಹೇಳಿದರು.
40 ಸದಸ್ಯ ಬಲದ ಗೋವಾ ವಿಧಾನಸಭೆಗೆ 2017ರಲ್ಲಿ ನಡೆದ ಚುನಾವಣೆಯಲ್ಲಿ 17 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಗೆ 13 ಸ್ಥಾನ ಸಿಕ್ಕಿದ್ದವು. ಗೋವಾ ಫಾರ್ವರ್ಡ್ ಪಾರ್ಟಿ, ಇನ್ನಿತರರ ನೆರವು ಪಡೆದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಸರ್ದೇಸಾಯಿ ಉಪಮುಖ್ಯಮಂತ್ರಿಯಾಗಿದ್ದರು. ಅದಾದ ನಂತರ 12 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ್ದರು. ಬಳಿಕ ಸರ್ದೇಸಾಯಿ ಅವರನ್ನು ಬಿಜೆಪಿ ವಜಾಗೊಳಿಸಿತ್ತು. ಸದ್ಯ ಬಿಜೆಪಿ ಬಳಿ 27 ಶಾಸಕರು ಇದ್ದಾರೆ. ಬಿಜೆಪಿ ಸರ್ಕಾರವನ್ನು ಬೀಳಿಸಲು ಶಿವಸೇನೆ ಕನಿಷ್ಠ 7 ಶಾಸಕರನ್ನು ಸೆಳೆಯಬೇಕಾಗುತ್ತದೆ.
Comments
Post a Comment