ಐದು ಹಂತಗಳ ಮತದಾನದ ನಂತರ ಜಾರ್ಖಂಡಿನ ಮತದಾರ ( jharkhand exit) ಬಿಜೆಪಿಯನ್ನು ಕಿತ್ತೊಸೆದು ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರಕ್ಕೆ ತರಲು ಮನಸ್ಸು ಮಾಡಿದ್ದಾನೆ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.
ಜಾರ್ಖಂಡಿನಲ್ಲಿ ಒಟ್ಟು ಐದು ಹಂತದಲ್ಲಿ ಚುನಾವಣೆ ನಡೆದಿದ್ದು, ಶುಕ್ರವಾರ ಐದನೇ ಹಾಗೂ ಕೊನೆಯ ಹಂತದ ಮತದಾನ ಸಂಪನ್ನವಾಯಿತು. ನಂತರ ನಡೆಸಲಾದ ಮತಗಟ್ಟೆ ಸಮೀಕ್ಷೆಗಳಲ್ಲಿ ಜನ ಕಾಂಗ್ರೆಸ್-ಜೆಎಂಎಂ ಮೈತ್ರಿಕುಟದ ಪರ ಒಲವು ತೋರಿರುವುದು ಕಂಡುಬಂದಿದೆ. ಡಿಸೆಂಬರ್ 23ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿರುವ ಬಿಜೆಪಿಗೆ ಕಾಂಗ್ರೆಸ್ ಜೆಎಂಎಂ, ಆರ್‍ಜೆಡಿ ಮತ್ತು ಇನ್ನು ಕೆಲವು ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಚುನಾವಣೆ ಎದುರಿಸಿದ್ದವು. ಹಾಲಿ ಸಿಎಂ ರಘುಭರ್ ದಾಸ್ ಅವರಿಗೆ ವಿರುದ್ಧ ವಾಗಿ ಮೈತ್ರಿಕೂಟವು ಹೇಮಂತ್ ಸೋರೆನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಬಿಂಬಿಸಿತ್ತು.
ಕಾಂಗ್ರೆಸ್ ಪಕ್ಷಕ್ಕೆ ಹೋಲಿಸಿದಲ್ಲಿ ಈ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅತ್ಯಂತ ವ್ಯಾಪಕವಾದ ಪ್ರಚಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
Comments
Post a Comment