ಒಂದು ವೇಳೆ ನಾನೇನಾದರು ರಾಜಕೀಯಕ್ಕೆ ಬಂದರೆ ನನ್ನ ಪತ್ನಿ ನನ್ನನ್ನು ತೊರೆದು ಹೋಗುವುದಾಗಿ ತಿಳಿಸಿದ್ದಾರೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ತಿಳಿಸಿದ್ದಾರೆ.
ಪ್ರಮುಖ ಆಂಗ್ಲ ಪತ್ರಿಕೆಯೊಂದಕ್ಕೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ರಾಜಕೀಯ ಮತ್ತು ರಾಜಕೀಯ ಪಕ್ಷಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ರಾಜಕೀಯ ಎಲ್ಲಾ ಕಡೆಯೂ ಒಂದೇ ರೀತಿಯಲ್ಲಿದೆ. ರಾಜಕೀಯದಲ್ಲಿ ಗದ್ದಲ ಹೆಚ್ಚು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಬೇರೆಯವರು ಭಾಷಣ ಮಾಡಿ ಮತಗಳನ್ನು ಗಳಿಸಬಹುದು. ಆದರೆ, ಅದು ನನಗೆ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷ ಸ್ಥಾಪಿಸುವ ಉದ್ದೇಶ ನನಗಿಲ್ಲ. ನನ್ನ ಬರವಣಿಗೆಗಳು ನಿಮ್ಮ ಮುಂದಿವೆ. ನನ್ನ ನಿಲುವುಗಳು ಮತ್ತು ಅಭಿಪ್ರಾಯಗಳೇನು ಎಂಬುದು ಎಲ್ಲರಿಗೂ ಗೊತ್ತಿದೆ. ರಾಜಕೀಯಕ್ಕೆ ನಾನು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮನ್ನು ಸಚಿವರಾಗಿ ನೇಮಕ ಮಾಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜನ್ ಅದು ದೂರದ ಮಾತು. ನಾನು ಏನಾಗಿದ್ದೇನೆಯೋ ಅದರಲ್ಲಿ ಖುಷಿ ಇದೆ. ನಾನು ಶೈಕ್ಷಣಿಕ ಕ್ಷೇತ್ರದ ಕೆಲಸವನ್ನು ಇಷ್ಟ ಪಡುತ್ತೇನೆ. ನಾನು ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೇನೆ. ಇತ್ತೀಚೆಗೆ ನನ್ನ ಹೊಸ ಪುಸ್ತಕ ‘ದಿ ಥರ್ಡ್ ಪಿಲ್ಲರ್’ ಬಿಡುಗಡೆಯಾಗಿದೆ. ನಾನು ಈಗ ನಿಭಾಯಿಸುತ್ತಿರುವ ಜವಾಬ್ದಾರಿಗಳಲ್ಲೇ ನಾನು ಖುಷಿಯಿಂದಿದ್ದೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
Comments
Post a Comment