ಖರ್ಗೆ ಕೋಟೆಯಲ್ಲಿ ತತ್ತರಿಸಿದ ಕಾಂಗ್ರೆಸ್ !! ರಾರಾಜಿಸಿದ ಬಿಜೆಪಿ


ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಡಾ. ಮಲ್ಲಿಕಾರ್ಜುನ್ ಖರ್ಗೆಯವರು ಜಿಲ್ಲೆಯ ಗುರಮಠಕಲ್ ವಿಧಾನಸಭಾ ಕ್ಷೇತ್ರದಿಂದಲೇ ರಾಜಕೀಯ ಜೀವನ ಆರಂಭಿಸಿದರು. ಆದರೆ ಇಂದು ಕ್ಷೇತ್ರದಿಂದ ದಿನ ದಿನಕ್ಕೆ ಪಕ್ಷದ ವರ್ಚಸ್ಸು ಕುಸಿಯುತ್ತಿದೆ. 1972ರಲ್ಲಿ ಗುರಮಠಕಲ್ ಮೀಸಲು ಮತ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಸ್ಪರ್ಧಿಸಿದ ಖರ್ಗೆಯವರು ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದ್ದರು.

ನಂತರ 2008ರವರೆಗೆ ಇದೇ ಕ್ಷೇತ್ರದಿಂದ ಸತತ 8 ಬಾರಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರ ರಾಜ್ಯದಲ್ಲಿ ಬಂದ ಸಂದರ್ಭಗಳಲ್ಲಿ ಹಲವಾರು ಮಹತ್ವದ ಖಾತೆಗಳ ಸಚಿವರಾಗಿ ಅಭಿವೃದ್ದಿ ಕೆಲಸ ಮಾಡುವ ಮೂಲಕ ಗುರಮಠಕಲ್ ಕ್ಷೇತ್ರ ರಾಜ್ಯದ ಗಮನ ಸೆಳೆಯುವ ಜೊತೆಗೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂಬ ಹೆಸರು ಬರುವಂತೆ ಕೆಲಸ ಮಾಡಿದರು.

2008ರಲ್ಲಿ ಗುರಮಠಕಲ್ ಮತಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಖರ್ಗೆಯವರು ಸ್ಥಳೀಯ ನಾಯಕರಿಗೆ ಅವಕಾಶ ನೀಡದೆ ಚಿತ್ತಾಪೂರದಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಅವರಿಗೆ ಅವಕಾಶ ನೀಡಿ ಗೆಲ್ಲಿಸಿದರು. 2013ರಲ್ಲಿ ಮತ್ತೆ ಚಿಂಚನಸೂರ ಕಡಿಮೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ 2ವರ್ಷ ಕೆಲಸ ಮಾಡಿದರು.

2008ರಲ್ಲಿ ಗುರಮಿಠಕಲ್ ಮತಕ್ಷೇತ್ರದಿಂದ ಸಾಮಾನ್ಯ ಕ್ಷೇತ್ರವಾಗಿ ಬದಲಾವಣೆಯಾಯಿತು. ಪರಿಣಾಮ ಅವರು ಕಲಬುರಗಿ ಜಿಲ್ಲೆಯ ಚಿತ್ತಾಪೂರ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಸ್ಪರ್ಧಿಸಿ 9ಬಾರಿ ಗೆಲುವು ಸಾಧಿಸಿದ್ದರು. ಆದರೆ ಪಕ್ಷ ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. 2009ರಲ್ಲಿ ಕಲಬುರಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷವು ಖರ್ಗೆಯವರನ್ನು ಕಣಕ್ಕಿಳಿಸಿತು. ಆ ಚುನಾವಣೆಯಲ್ಲಿ ಕೂಡ ಅವರು ಪ್ರಯಾಸದ ಗೆಲುವು ಸಾಧಿಸುವ ಮೂಲಕ ಕೇಂದ್ರದಲ್ಲಿ ಅಂಧಿನ ಪ್ರಧಾನಿ ಮನಮೋಹನ್ ಸಿಂಗ್ ಕಾರ್ಮಿಕ ಸಚಿವರು ಹಾಗೂ ನಂತರ ದಿನಗಳಲ್ಲಿ ರೈಲ್ವೇ ಸಚಿವರಾಗಿ ಕೆಲಸ ಮಾಡಿದ್ದರು.

ಇನ್ನೊಂದಡೆ ಅವರ ಪುತ್ರನನ್ನು 2013ರಲ್ಲಿ ಚಿತ್ತಾಪೂರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿ ಗೆಲ್ಲಿಸಿದ್ದರು. ಅವರು ಕೂಡ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಐಟಿ ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಕೆಲಸ ಮಾಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರು ಮರು ಆಯ್ಕೆಯಾಗಿ ಲೋಕಸಭೈಯಲ್ಲಿ ಕಾಂಗ್ರೆಸ್ ಸಂಸದಿಯ ನಾಯಕರಾಗಿ 5 ವರ್ಷಗಳ ಸದನದಲ್ಲಿ ಪ್ರಧಾನಿ ಮೋದಿ ಆಡಳಿತವನ್ನು ಟೀಕಿಸುತ್ತ ಎಲ್ಲರ ಗಮನ ಸೆಳೆದರು.

ಕಲಬುರಗಿ ಜಿಲ್ಲೆಯ ಅಫಜಲಪೂರ ವಿಧಾನಸಭಾ ಕ್ಷೇತ್ರದಿಂದ 6 ಬಾರಿ ಶಾಸಕರಾಗಿದ್ದ ಮಾಲಿಕಯ್ಯ ಗುತ್ತೆದಾರ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಅದರಂತೆ ಯಾದಗಿರಿ ಕ್ಷೇತ್ರದಿಂದ 5 ಬಾರಿ ಆಯ್ಕೆಯಾಗಿದ್ದ ಡಾ. ಮಾಲಕರೆಡ್ಡಿ ಅವರಿಗೂ ಸಚಿವ ಭಾಗ್ಯ ಸಿಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2.50ವರ್ಷ ಆಡಳಿತ ನಂತರ ತಮ್ಮ ಸಚಿವ ಸಂಪುಟದಲ್ಲಿದ್ದ ಖಮರಲ್ ಇಸ್ಲಾಂ ಹಾಗೂ ಬಾಬುರಾವ್ ಚಿಂಚನಸೂರ ಅವರನ್ನು ಕೈ ಬಿಟ್ಟು ಖರ್ಗೆಯವರ ಪುತ್ರ ಪ್ರಿಯಾಂಕ ಖರ್ಗೆಯವರಿಗೆ ಸಚಿವ ಸ್ಥಾನ ನೀಡಲಾಯಿತು. ಇದರಿಂದ 4 ಜನ ನಾಯಕರು ಖರ್ಗೆಯವರ ವಿರುದ್ದ ಬಹಿರಂಗವಾಗಿ ತಮ್ಮ ಅಸಮದಾನ ವ್ಯಕ್ತಪಡಿಸಿದರು.

2018ರ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮಾಲಿಕಯ್ಯ ಗುತ್ತೆದಾರ ಅವರು ಬಿಜೆಪಿ ಸೇರ್ಪಡೆಗೊಂಡು ಅಫಜಲಪೂರದಿಂದ ಸ್ಪರ್ಧಿಸಿದ್ದರು. ಖರ್ಗೆಯವರ ತಂಡ ಅವರನ್ನು ಸೋಲಿಸಿತು.  ಅದರಂತೆ ಗುರಮಿಠಕಲ್ ಕ್ಷೇತ್ರದಲ್ಲಿ ಚಿಂಚನಸೂರ ಜೆಡಿಎಸ್ ಅಭ್ಯರ್ಥಿ ನಾಗನಗೌಡ ಕಂದಕೂರ ವಿರುದ್ದ 24 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ಯಾದಗಿರಿಯಲ್ಲಿ ಮಾಜಿ ಸಚಿವ ಡಾ. ಎ.ಬಿ. ಮಾಲಕರೆಡ್ಡಿ ಕೂಡ ಪರಾಭವಗೊಂಡರು. ನಂತರ ದಿನಗಳಲ್ಲಿ ಇವರೆಲ್ಲರು ಕೂಡಿ ಚುನಾವಣೆಯಲ್ಲಿ ನಾವು ಸೋಲಲು ಖರ್ಗೆಯವರು ಪ್ರಮುಖ ಕಾರಣ ಎಂದು ಆರೋಪಿಸಿ ಟೀಕಿಸಿದರು.

ಕಲಬುರಗಿ ಜಿಲ್ಲೆಯ ಚಿಂಚೊಳಿ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಡಾ. ಉಮೇಶ ಜಾದವ್ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಲು ಬಾರಿಲಾಬಿ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಅದಕ್ಕೆಲ್ಲ ಕಾರಣ ಖರ್ಗೆಯವರು ಎಂದು ಜಾದವ್ ತಮ್ಮ ಬೆಂಬಲಿಗರಲ್ಲಿ ಅಸಮಧಾನ ವ್ಯಕ್ತಪಡಿಸುತ್ತಿದ್ದರು.

ಈ ಎಲ್ಲಾ ಬೆಳವಣಿಗೆಯನ್ನು ಗಮನಿಸಿದ ಮಾಜಿ ಸಚಿವರಾದ ಡಾ. ಎ.ಬಿ ಮಾಲಕರೆಡ್ಡಿ ಹಾಗೂ ಬಾಬುರಾವ್ ಚಿಂಚನಸೂರ ಲೋಕಸಭಾ ಚುನಾವಣೆ ಹತ್ತಿರದಲ್ಲಿ ಬಿಜೆಪಿ ಸೇರ್ಪಡೆಗೊಂಡು ಗುತ್ತೆದಾರ ಜೊತೆಗೂಡಿ ಕಾಂಗ್ರೆಸ್‍ನಲ್ಲಿದ್ದ ಶಾಸಕ ಜಾದವ್ ಅವರನ್ನು ಬಿಜೆಪಿಗೆ ಸೆಳೆದು ಖರ್ಗೆ ವಿರುದ್ದ ಕಲಬುರಗಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು.

ಖರ್ಗೆಯವರು ಕಲಬುರಗಿ ಕ್ಷೇತ್ರದಲ್ಲಿ ಸಾಕಷ್ಟ ಅಭಿವೃದ್ದಿ ಕೆಲಸ ಮಾಡಿದರು 10 ವರ್ಷದಲ್ಲಿ ಪಕ್ಷದ ಕಾರ್ಯಕರ್ತರಿಂದ ದೂರವಾದರು ಅಲ್ಲದೆ ಪ್ರಮುಖ ನಾಯಕರಿಗೆ ಅವಕಾಶ ನೀಡದೆ ಪುತ್ರ ವ್ಯಾಮೋಹ ಹೊಂದಿದ್ದಾರೆ ಎಂಬ ನೋವು ಕೈ ನಾಯಕರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನೆ ಮಾಡಿತು.  ನಾನು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂಬ ಆತ್ಮವಿಶ್ವಾಸದಲ್ಲಿ ಖರ್ಗೆಯವರು 2019ರ ಲೋಕಸಭಾ ಚುನಾವಣೆಯಲ್ಲಿ ಬಾರಿ ಪ್ರಚಾರ ನಡೆಸಿದರು. ಅವರ ರಾಜಕೀಯ ವಿರೋಧಿಗಳು ರಚಿಸಿದ ರಾಜಕೀಯ ರಣವ್ಯೂಹ ಅರಿಯುವಲ್ಲಿ ವಿಫಲರಾಗಿ ಜಾದವ್ ವಿರುದ್ದ 96 ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು.

ನಾನು ಗುರಮಠಕಲ್ ಮತಕ್ಷೇತ್ರ ಜನರ ಆಶೀರ್ವಾದದಿಂದಲೇ ರಾಷ್ಟ್ರ ಮಟ್ಟದ ರಾಜಕಾರಣಕ್ಕೆ ತಲುಪಿದ್ದೇನೆ ಎಂದು ಅವರು ಅನೇಕ ಬಾರಿ ಬಹಿರಂಗ ಸಮಾವೇಶಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.  2 ಬಾರಿ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಗುರಮಠಕಲ್ ವಿಧಾನಸಭಾ ಕ್ಷೇತ್ರದ ಮತದಾರರು 2019ರ ಲೋಕಸಭಾ ಚುನಾವಣೆಯಲ್ಲಿ ಕೋಲಿ ಸಮಾಜದ ನಾಯಕರಾದ ಚಿಂಚನಸೂರ ಮೇಲೆ ವಿಶ್ವಾಸ ವಿಟ್ಟು ಕ್ಷೇತ್ರದಲ್ಲಿ ಡಾ. ಜಾದವ್‍ಗೆ 20 ಸಾವಿರ ಮತಗಳ ಮುನ್ನಡೆಗೆ ಕಾರಣೀಭೂತರಾದರು.

ಲೋಕಸಭಾ ಚುನಾವಣೆಯಲ್ಲಿ ಖರ್ಗೆಯವರು ಸೋಲುತ್ತಿದ್ದಂತೆ ಅವರಿಗೆ ರಾಜಕೀಯ ಜನ್ಮ ನೀಡಿದ ಗುರಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ನಾಯಕರ ಸರಣಿ ತಪ್ಪುಗಳಿಂದ ಪಕ್ಷದ ವರ್ಚಸ್ಸು ದಿನ ದಿನಕ್ಕೆ ಕುಸಿಯುತ್ತಿದೆ.

ಕೈ ಕಾರ್ಯಕರ್ತರು ಸಮರ್ಥ ನಾಯಕರ ಕೊರತೆಯಿಂದ ಅನಿವಾರ್ಯವಾಗಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳತ್ತ ಮುಖ ಮಾಡಿದ್ದಾರೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಸ್ಫರ್ಧಿಸಲು ಪ್ರಭಾವಿ ನಾಯಕರ ಕೊರತೆ ಇದೆ ನಮ್ಮ ಸಮಸ್ಯೆಗಳಿಗೆ ಯಾರು ಸ್ಪಂದಿಸುವರು ಎಂಬ ಪ್ರಶ್ನೆ ಕಾರ್ಯಕರ್ತರಲ್ಲಿ ಮೂಡಿದೆ.  ಖರ್ಗೆಯವರಿಗೆ ರಾಜಕೀಯ ಜನ್ಮ ನೀಡಿದ ಗುರಮಠಕಲ್ ಮತಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷವು ಮತ್ತೆ ಮುನ್ನೊಟಕ್ಕೆ ಬರುವುದೇ ಕಾಲವೇ ನಿರ್ಧರಿಸಲಿದೆ.

Comments