ಡಿಸಿಎಂ ಸ್ಥಾನ ಕೊಡದಿದ್ದರೆ ಜೆಡಿಎಸ್ ಗೆ ಸೇರುವುದಾಗಿ ಘೋಷಣೆ ಮಾಡಿದ ಯಡಿಯೂರಪ್ಪ ಅವರ ಬಲಗೈ ಬಂಟ




ಒಂದೆಡೆ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕಗ್ಗಂಟ್ಟಾಗಿ ಪರಿಣಮಿಸಿದ್ದರೆ ಮತ್ತೊಂದೆಡೆ ಡಿಸಿಎಂ ಸ್ಥಾನ ಸಿಗದಿರುವುದರಿಂದ ಸಚಿವ ಶ್ರೀರಾಮುಲು ರಾಜೀನಾಮೆ ಬೆದರಿಕೆ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಬಿಕ್ಕಟ್ಟು ಸೃಷ್ಟಿಸಿದೆ. ನನಗೆ ಉಪಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಸಚಿವ ಸ್ಥಾನ ಬೇಡವೇ ಬೇಡ. ಶಾಸಕನಾಗಿ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷದಲ್ಲಿ ಮುಂದುವರೆಯುತ್ತೇನೆ ಎಂದು ರಾಮುಲು ಬೆದರಿಕೆಯೊಡ್ಡಿದ್ದಾರೆ.
ನವದೆಹಲಿಗೆ ತೆರಳಿದ್ದ ಶ್ರೀರಾಮುಲು, ಪಕ್ಷದ ರಾಷ್ಟ್ರೀಯ ಪ್ರಮುಖರೊಬ್ಬರನ್ನು ಭೇಟಿ ಮಾಡಿ ಸಚಿವ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಸಂಪುಟ ವಿಸ್ತರಣೆ ವೇಳೆ ನನಗೆ ಕೊಟ್ಟ ಮಾತಿನಂತೆ ಡಿಸಿಎಂ ಸ್ಥಾನ ನೀಡದಿದ್ದರೆ ನಾನು ಸಚಿವ ಸ್ಥಾನ ತೊರೆಯುತ್ತೇನೆ ಎಂದು ರಾಮುಲು ನೇರ ಮಾತುಗಳಲ್ಲೇ ಹೇಳಿದ್ದಾರೆ.
ಬ್ಲಾಕ್‍ಮೇಲ್ ಮಾಡಿ ಉಪಮುಖ್ಯಮಂತ್ರಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಕರ್ನಾಟಕದಲ್ಲಿ ನಮ್ಮ ಸಮುದಾಯ ಅತಿ ಹೆಚ್ಚು ಜನ ಸಂಖ್ಯೆಹೊಂದಿರುವ ಸಮುದಾಯಗಳಲ್ಲಿ ಐದನೇ ಸ್ಥಾನ ಪಡೆದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನನ್ನನ್ನು ಉಪಮುಖ್ಯಮಂತ್ರಿ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ವಾಲ್ಮೀಕಿ ಸಮುದಾಯದಿಂದ 8 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಹುಣಸೂರಿನಲ್ಲಿ ನಮ್ಮ ಅಭ್ಯರ್ಥಿ ಪರಾಭವಗೊಂಡರೂ ಬಿಜೆಪಿಗೆ 50ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಜತೆಗೆ ಚಿಕ್ಕಬಳ್ಳಾಪುರ, ಯಶವಂತಪುರ, ರಾಣೇಬೆನ್ನೂರು, ಹಿರೇಕೆರೂರು ಕ್ಷೇತ್ರಗಳಲ್ಲಿ ನಮ್ಮ ಸಮುದಾಯದವರು ದೊಡ್ಡ ಮಟ್ಟದಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.
ವಾಲ್ಮೀಕಿ ಸಮುದಾಯ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ನನ್ನನು ಉಪಮುಖ್ಯಮಂತ್ರಿ ಮಾಡಲು ಕೇವಲ ಆರೋಗ್ಯ ಮತ್ತು ಕುಟುಂಬ ಖಾತೆಗೆ ಸೀಮಿತಗೊಳಿಸಿದರು. ಸೋತ ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಮಾಡುವ ಜತೆಗೆ ಪ್ರಬಲ ಖಾತೆ ಕೊಟ್ಟಿದ್ದೀರಿ. ಹಾಗಾದರೆ ನಾವು ಪಕ್ಷಕ್ಕೆ ದುಡಿದಿಲ್ಲವೇ ಎಂದು ರಾಮುಲು ರಾಷ್ಟ್ರೀಯ ನಾಯಕರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಮೀಸಲಾತಿಯಲ್ಲಿ ಆನ್ಯಾಯ:
ಸಂಪುಟದಲ್ಲಿ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದ್ದಲ್ಲದೆ, ಜನಸಂಖ್ಯೆಗೆ ಅನುಗುಣವಾಗಿ ವಾಲ್ಮೀಕಿ ಸಮುದಾಯಕ್ಕೆ ಉದ್ಯೋಗ, ಶಿಕ್ಷಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನೂ ಈಡೇರಿಸಿಲ್ಲ. ಮೀಸಲಾತಿ ನೀಡದಿದ್ದರೆ ನೀವು ಸರ್ಕಾರದಲ್ಲಿ ಯಾವ ಕಾರಣಕ್ಕಾಗಿ ಮುಂದುವರೆಯುತ್ತೀರಿ ಎಂದು ನಮ್ಮ ಸಮುದಾಯದವರು ಹಾದಿಬೀದಿಯಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಎರಡು ದಿನಗಳ ಹಿಂದೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲೂ ನಮ್ಮ ಸಮುದಾಯದ ಶ್ರೀಗಳು ಸಮಾಜಕ್ಕೆ ನೀವು ನ್ಯಾಯ ಒದಗಿಸದಿದ್ದರೆ ಯಾವ ಪುರುಷಾರ್ಥಕ್ಕೆ ಜನಪ್ರತಿನಿಧಿಗಳಾಗುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೀಸಲಾತಿ ಪ್ರಮಾಣ ಹೆಚ್ಚಳ ಮಾಡುವ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯಲ್ಲಿ ಸರ್ಕಾರ ಸಮಿತಿ ರಚನೆ ಮಾಡಿದೆ.
ಈ ಸಮಿತಿಯು ಹಲವು ಬಾರಿ ಸಭೆಗಳನ್ನು ನಡೆಸಿ ಮಾಹಿತಿ ಸಂಗ್ರಹಿಸಿದೆ. ಆದರೆ, ಸರ್ಕಾರಕ್ಕೆ ಇನ್ನೂ ವರದಿಯನ್ನೂ ನೀಡಿಲ್ಲ ಎಂದು ದೂರಿದ್ದಾರೆ. ಹೀಗೆ ಎಲ್ಲಾ ಹಂತಗಳಲ್ಲೂ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. ಹೀಗಾಗಿ ನಾನು ಸಂಪುಟದಲ್ಲಿ ಮುಂದುವರೆಯುವುದರಲ್ಲಿ ಅರ್ಥವೇ ಇಲ್ಲ. ಸಚಿವ ಸ್ಥಾನಕ್ಕೆನಾನು ರಾಜೀನಾಮೆ ನೀಡುವುದು ಖಚಿತ ಎಂದು ರಾಮುಲು ವರಿಷ್ಟರ ಮುಂದೆ ಹೇಳುಕೊಂಡಿದ್ದಾರೆ.
ನೀವು ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮಗೆ ಡಿಸಿಎಂ ಸ್ಥಾನ ಕೊಡಬೇಕೇ ಬೇಡವೇ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚಿಸುತ್ತೇವೆ. ಪಕ್ಷಕ್ಕೆ ನೀವು ನೀಡಿರುವ ಕೊಡುಗೆಯನ್ನು ನಾವು ಕಡೆಗಣಿಸುವುದಿಲ್ಲ. ಈಗಾಗಲೇ ಮೂರು ಡಿಸಿಎಂ ಸ್ಥಾನಗಳನ್ನು ನೀಡಿರುವುದರಿಂದ ಪಕ್ಷದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಇನ್ನೂ ಹೆಚ್ಚುವರಿಯಾಗಿ ಎರಡರಿಂದ ಮೂರು ಡಿಸಿಎಂ ಸೃಷ್ಟಿಸುವಂತೆ ಕೆಲವರು ಒತ್ತಡ ಹಾಕುತ್ತಿದ್ದಾರೆ. ಮತ್ತೊಂದೆಡೆ ಇರುವ ಡಿಸಿಎಂ ಸ್ಥಾನಗಳನ್ನು ಕಿತ್ತು ಹಾಕುವಂತೆ ಇನ್ನು ಕೆಲವರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಡಿಸಿಎಂ ಸ್ಥಾನಗಳನ್ನು ಮುಂದುವರೆಸಬೇಕೇ, ಇಲ್ಲವೇ ರದ್ದುಪಡಿಸಬೇಕೆ ಎಂಬುದರ ಬಗ್ಗೆ ವರಿಷ್ಠರು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ನೀವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬೇರದೇ ಆದ ಸಂದೇಶ ರವಾನೆಯಾಗುತ್ತದೆ.
ಸರ್ಕಾರ ಈಗ ತಾನೆ ಸ್ಥಿರವಾಗಿ ಸರಿಯಾದ ದಾರಿಗೆ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಗೊಂದಲಗಳನ್ನು ಸೃಷ್ಟಿಸುವುದು ಬೇಡ. ನಾನು ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ ನಿಮಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕೆಂದು ನಿರ್ದೇಶನ ನೀಡುತ್ತನೇ ಎಂದು ಬಿಜೆಪಿ ರಾಷ್ಟ್ರೀಯ ನಾಯಕರೊಬ್ಬರು ಶ್ರೀರಾಮುಲು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ.
ಆದರೆ, ಇದ್ಯಾವುದಕ್ಕೂ ಜಗ್ಗದ ಶ್ರೀರಾಮುಲು ನಮ್ಮ ಸಮುದಾಯಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗದೇ ಇದ್ದರೆ ಒಂದು ಕ್ಷಣವೂ ಕೂಡ ನಾನು ಸಚಿವ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿ ಅಸಮಾಧಾನದಿಂದಲೇ ಹೊರ ಬಂದಿದ್ದಾರೆ.

Comments