ತಮ್ಮ ಕುಟುಂಬ ಸದಸ್ಯರು ನಡೆಸಿರುವ ಭ್ರಷ್ಟಾಚಾರದ ತನಿಖೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಿದ್ಧರಿಲ್ಲ. ಆರೋಪ ಸಾಬೀತಾದರೆ ರಾಜೀನಾಮೆ ಕೊಡುತ್ತೇನೆ ಎಂದು ಬಾಯಿಮಾತಿಗಷ್ಟೇ ಅವರು ಹೇಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ನಡೆಸಿರುವ ಭ್ರಷ್ಟಾಚಾರವನ್ನು ತನಿಖೆಗೆ ವಹಿಸಬೇಕು.
ಒಂದು ವೇಳೆ ಆರೋಪ ಸಾಬೀತಾಗದಿದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ಅದೇ ಸಾಬೀತಾದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಬಿಎಸ್ವೈ ಗೆ ಹೇಳಿದ್ದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ನಡೆಸಿ. ಆರೋಪ ಸಾಬೀತಾಗದೆ ಇದ್ದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧ ಎಂದಿದ್ದೆ. ನಾನು ಹಾಕಿದ ಈ ಸವಾಲನ್ನು ಅವರು ಸ್ವೀಕರಿಸಬೇಕಿತ್ತು. ಆದರೆ, ಅವರು ಅನಗತ್ಯ ಚರ್ಚೆ ಮಾಡುತ್ತಿದ್ದಾರೆ ಎಂದರು.
ಉತ್ತರಪ್ರದೇಶದ ದಲಿತ ಯುವತಿಯ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣವನ್ನು ಖಂಡಿಸಿದ ಸಿದ್ದರಾಮಯ್ಯ, ಅಲ್ಲಿ ಬಿಜೆಪಿಯ ಸರ್ಕಾರವೇ ಅಧಿಕಾರದಲ್ಲಿದೆ. ದಿಲ್ಲಿಯಲ್ಲಿ ಶೀಲಾ ದೀಕ್ಷಿತ್ ಸರ್ಕಾರ ಇದ್ದಾಗ ನಿರ್ಭಯಾ ಪ್ರಕರಣದಲ್ಲಿ, ಅವರ ಮೇಲೆ ಭಾರಿ ದೊಡ್ಡ ಮಟ್ಟದ ಆರೋಪವನ್ನು ಮಾಡಿದ್ದರು. ಇಂದು ಉತ್ತರಪ್ರದೇಶದಲ್ಲಿ ಬಡ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದು, ಆ ಯುವತಿ ಸಾವನ್ನಪ್ಪಿದ್ದಾಳೆ. ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಆದರೆ, ಉತ್ತರಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
Comments
Post a Comment