ಇತ್ತೀಚೆಗಷ್ಟೇ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿಗೆ ಸೇರ್ಪಡೆಯಾದ ಶಾಸಕ ಅರ್ಜುನ್ ಸಿಂಗ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದ 100 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಹಾಗೂ ಅತಿ ಸೀಘ್ರದಲ್ಲೇ ಅವರೆಲ್ಲರೂ ಕಮಲ ಪಾಳಯಕ್ಕೆ ಸೇರ್ಪಡೆಗೊಳ್ಳುತ್ತಾರೆ ಎನ್ನುವ ಮೂಲಕ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ.
ಹಿಂದಿನ ಚುನಾವಣೆಗಳಲ್ಲಿ ಕೋಲ್ಕತ್ತಾದ ದಾಮನ್ ನಿಂದ ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ಅರ್ಜುನ್ ಸಿಂಗ್ ರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಬೈರಕ್ಪುರ್ ಕ್ಷೇತ್ರದಿಂದ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಅರ್ಜುನ್ ಸಿಂಗ್ ಲೋಕಸಭಾ ಚುನಾವಣೆಗೂ ಮೊದಲು ಟಿಎಂಸಿಯ ಕೆಲ ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಇನ್ನು ಕೆಲವರು ಚುನಾವಣೆ ಬಳಿಕ ಕಮಲ ಪಾಳಯಕ್ಕೆ ಬರಲಿದ್ದಾರೆ. ಈಗಾಗಲೇ ಹಲವು ನಾಯಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವರೂ ಬಿಜೆಪಿಗೆ ಸೇರ್ಪಡೆಯಾಗುತ್ತಾರಾ? ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದ ಅರ್ಜುನ್ ಸಿಂಗ್ 'ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾಕೆಂದರೆ ಈಗಲೇ ನಾನು ಹೌದು ಎಂದು ಹೇಳಿದರೆ ಆ ಸಚಿವರನ್ನು ಅಮಾನತ್ತುಗೊಳಿಸುವ ಸಾಧ್ಯತೆಗಳಿವೆ' ಎಂದಿದ್ದಾರೆ.
ಆದರೆ ಈ ಮಾತುಗಳನ್ನು ಅಲ್ಲಗಳೆದಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ವಕ್ತಾರರು 'ಅರ್ಜುನ್ ಸಿಂಗ್ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಮ್ಮ ಶಾಸಕರು ಅವರನ್ನು ಅನುಕರಿಸುತ್ತಿರುವುದನ್ನು ನೀವು ನೋಡಿದ್ದೀರಾ' ಎಂದು ಪ್ರಶ್ನಿಸಿದ್ದಾರೆ.
Comments
Post a Comment