ರಾಜ್ಯ ರಾಜಕಾರಣದಲ್ಲಿ ಕೆಲವು ನಾಯಕರು ನಾನು ಅಕ್ಕಿ ಕೊಟ್ಟೆ, ಸೈಕಲ್ ಕೊಟ್ಟೆ, ಸಾಲಮನ್ನಾ ಮಾಡಿದೆ ಅಂತ ಹೇಳ್ಕೋತಾರೆ. ಹಾಗೆಯೇ ನನ್ನ ಕ್ಷೇತ್ರ ಕನಕಪುರದಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪನೆ ಮಾಡುವುದು ನನ್ನ ಲೈಫ್ ಟೈಮ್ ಗುರಿ. ಒಂದು ವೇಳೆ ಇದಕ್ಕೆ ರಾಜ್ಯ ಸರ್ಕಾರ ಅಡ್ಡ ಬಂದರೆ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ್ದಾಗ ಕನಕಪುರಕ್ಕೆ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಿತ್ತು. ಆದರೆ, ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವೈದ್ಯಕೀಯ ಕಾಲೇಜನ್ನು ಅನರ್ಹ ಶಾಸಕ ಡಾ. ಸುಧಾಕರ್ ಒತ್ತಾಯದ ಮೇರೆಗೆ ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ವರ್ಗಾಯಿಸಿದ್ದಾರೆ.
Image
ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಇಂದು ಆಯೋಜಿಸಲಾಗಿದ್ದ ದಿವಂಗತ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ನೀತಿಯ ವಿರುದ್ಧ ಕಿಡಿಕಾರಿರುವ ಡಿ.ಕೆ. ಶಿವಕುಮಾರ್, “ಯಾರನ್ನೋ ಹೊಸದಾಗಿ ಪಕ್ಷಕ್ಕೆ ಸೇರಿಸಿಕೊಂಡೆ ಅನ್ನೋ ಕಾರಣಕ್ಕೆ ಒಂದು ಕಡೆ ಮಂಜೂರಾಗಿರುವ ಕಾಲೇಜನ್ನು ಮತ್ತೊಂದು ಕಡೆಗೆ ನೀಡುವುದು ಸರಿಯಲ್ಲ. ಈ ಮೂಲಕ ಯಡಿಯೂರಪ್ಪ ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ.
ಅಧಿಕಾರ ಶಾಶ್ವತ ಅಲ್ಲ ಹೀಗಾಗಿ ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವ ವಿಚಾರದಲ್ಲಿ ಸರ್ಕಾರ ಹಿಂಜರಿಯುವುದು ಬೇಡ. ಚಿಕ್ಕಬಳ್ಳಾಪುರಕ್ಕೂ ಮತ್ತೊಂದು ಕಾಲೇಜು ಮಂಜೂರು ಮಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಕೆಲವು ನಾಯಕರು ನಾನು ಅಕ್ಕಿ ಕೊಟ್ಟೆ, ಸೈಕಲ್ ಕೊಟ್ಟೆ, ಸಾಲಮನ್ನಾ ಮಾಡಿದೆ ಅಂತಾರೆ. ಹಾಗೆಯೇ ಕನಕಪುರಕ್ಕೆ ವೈದ್ಯಕೀಯ ಕಾಲೇಜು ತರುವುದು ನನ್ನ ಲೈಫ್ಟೈಮ್ ಗುರಿ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ವಿಚಾರದಲ್ಲಿ ರಾಜಕೀಯ ಮಾಡಿದರೆ ನಾವು ಸುಮ್ಮನೆ ಕೂರುವುದಿಲ್ಲ” ಎಂದು ಎಚ್ಚರಿಸಿದ್ದಾರೆ.
Image
ಇದೇ ಸಂದರ್ಭದಲ್ಲಿ ಪಕ್ಷದ ಬೆಳವಣಿಗೆ ಕುರಿತು ಮಾತನಾಡಿದ ಅವರು, “ಯಾರಿಂದಲೂ ಕಾಂಗ್ರೆಸ್ ಪಕ್ಷವನ್ನು ಮುಗಿಸುವುದು ಸಾಧ್ಯವಿಲ್ಲ. ಈ ಪಕ್ಷಕ್ಕೆ ಅಷ್ಟು ದೊಡ್ಡ ಇತಿಹಾಸವಿದೆ. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇರಬಹುದು ಆದರೆ, ಎಲ್ಲರೂ ಒಂದಾಗಿ ಹೋಗಬೇಕಿದೆ. ಎಲ್ಲಾ ವರ್ಗದವರನ್ನು ಸಮಾನವಾಗಿ ತೆಗೆದುಕೊಂಡು ಹೋದರೆ ಮಾತ್ರ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಕಾರ್ಯಕರ್ತರು ತಳಮಟ್ಟದವರೆಗೆ ಹೋಗಿ ಕೆಲಸ ಮಾಡಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜಾತಿ ಧರ್ಮಗಳು ಅಧಿಕಾರಕ್ಕೆ ಬಂದ ಹಾಗೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

Comments
Post a Comment