ಸಿಎಂ ಬದಲಾವಣೆ ಮಾಡಲು ಹೊಸ ನ್ಯೂಸ್ ಕೊಟ್ಟ ರೇಬಲ್ ಯತ್ನಾಳ್ !! ಸಿಎಂ ಸ್ಥಾನವನ್ನು ಉಳಿಯದಂತೆ ಮಾಡಲು ಇರುವ ಪ್ಲಾನ್ ಇದೆ

 


ಒಂದು ಕಡೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹುಟ್ಟುಹಬ್ಬದ ಸಂಭ್ರಮ ರಾಜ್ಯಾದ್ಯಂತ ಧೂಳೆಬ್ಬಿಸುತ್ತಿದ್ದರೆ, ಮತ್ತೊಂದು ಕಡೆ ನಾಯಕತ್ವ ಬದಲಾವಣೆಯ ಬಿಜೆಪಿಯ ಭಿನ್ನರ ಧ್ವನಿ weಮತ್ತೊಮ್ಮೆ ಮೊಳಗಿದೆ.


ತಮ್ಮ ತವರು ಜಿಲ್ಲೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು 'ನಮ್ಮೊಲುಮೆ'ಯ ಅಭಿನಂದನೆ ಸ್ವೀಕರಿಸುತ್ತಿದ್ದರೆ, ಅತ್ತ ಬೆಂಗಳೂರಿನಲ್ಲಿ ಪಂಚಮಸಾಲಿ ವೀರಶೈವ ಲಿಂಗಾಯತ ಮೀಸಲಾತಿ ಹೋರಾಟದ ವೇದಿಕೆಯಲ್ಲಿ ಸದ್ಯದ ಅವರ ವಿರೋಧಿ ಬಿಜೆಪಿ ಬಣದ ದೊಡ್ಡ ದನಿಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ವಾಗ್ದಾಳಿ ಮುಂದುವರಿಸಿದ್ದಾರೆ.




ಕಳೆದ ವಾರ ಪಂಚಮಸಾಲಿ ಮೀಸಲಾತಿ ಹೋರಾಟದ ಬೃಹತ್ ಸಮಾವೇಶದಲ್ಲಿ ಸಿಎಂ ವಿರುದ್ಧ ನೇರ ದಾಳಿ ನಡೆಸಿದ ಬಳಿಕ ಯತ್ನಾಳ್, ದಿಢೀರ್ ದೆಹಲಿ ಭೇಟಿ ಸಹಜವಾಗೇ ಕುತೂಹಲ ಕೆರಳಿಸಿತ್ತು.


ಸಿಎಂ ಮತ್ತು ಅವರ ಪುತ್ರ ವಿಜಯೇಂದ್ರ ಯತ್ನಾಳ್ ವಿರುದ್ಧ ಪಕ್ಷದ ವರಿಷ್ಟರಿಗೆ ದೂರು ನೀಡಿದ್ದು, ಆ ಹಿನ್ನೆಲೆಯಲ್ಲಿ ಅವರಿಗೆ ನೋಟೀಸ್ ನೀಡಲಾಗಿತ್ತು. ನೋಟಿಸ್ ಬೆನ್ನಲ್ಲೇ ದೆಹಲಿಗೆ ಬುಲಾವ್ ಬಂದಿತ್ತು. ಆ ಹಿನ್ನೆಲೆಯಲ್ಲಿ ಅವರು ದೆಹಲಿಗೆ ತೆರಳಿದ್ದಾರೆ. ದೆಹಲಿಯಲ್ಲಿ ವರಿಷ್ಠರು ಯತ್ನಾಳ್ ಅವರಿಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಬಾಯಿಗೆ ಬೀಗ ಹಾಕಿಕೊಂಡು ಇರಲು ತಾಕೀತು ಮಾಡಿದ್ದಾರೆ. ಇಲ್ಲವಾದಲ್ಲಿ ಕಠಿಣ ಕ್ರಮ ಜರುಗಿಸುವ ಅಂತಿಮ ಎಚ್ಚರಿಕೆ ನೀಡಿದ್ದಾರೆ ಎಂಬ ವದಂತಿಗಳು ಹರಿದಾಡಿದ್ದವು.


ಈ ನಡುವೆ ತಮ್ಮ ದೆಹಲಿ ಭೇಟಿಯ ಬಗ್ಗೆ ತಮ್ಮದೇ ಆದ ಸ್ಪಷ್ಟನೆ ನೀಡಿದ ಯತ್ನಾಳ್, ಯಾವ ತಮಗೆ ಯಾವ ಬುಲಾವ್ ಬಂದಿಲ್ಲ. ತಮ್ಮ ಶಾಲೆಯೊಂದರ ಕೆಲಸದ ಮೇಲೆ ದೆಹಲಿಗೆ ಬಂದಿರುವುದಾಗಿ ಹೇಳಿದ್ದರು. ಜೊತೆಗೆ ದೆಹಲಿಯಿಂದ ವಾಪಸ್ಸಾದ ಬಳಿಕ ಸಚಿವರಾದ ಮುರುಗೇಶ್ ನಿರಾಣಿ ಮತ್ತು ಸಿ ಸಿ ಪಾಟೀಲರ ಮಾತುಗಳಿಗೆ ಉತ್ತರ ಕೊಡುವೆ ಎಂದಿದ್ದರು. ಆದರೆ, ಅದಾದ ಬಳಿಕ ಮೂರ್ನಾಲ್ಕು ದಿನಗಳವರೆಗೆ ಯತ್ನಾಳ್ ಮಾಧ್ಯಮಗಳ ಕಣ್ಣಿಗೆ ಬಿದ್ದಿರಲಿಲ್ಲ. ಹಾಗಾಗಿ ಬಾಯಿಗೆ ಬೀಗ, ತರಾಟೆಯಂತಹ ವದಂತಿಗಳಿಗೆ ಪುಷ್ಟಿ ದೊರೆತು, ಮಾಧ್ಯಮಗಳಲ್ಲಿ ಜೋರಾಗಿ ಸುದ್ದಿಯಾಗಿತ್ತು.


ಆದರೆ, ಅಂತಹ ಸುದ್ದಿಗಳ ಬೆನ್ನಲ್ಲೇ ಬೆಂಗಳೂರಿನ ಪಂಚಮಸಾಲಿ ಹೋರಾಟ ವೇದಿಕೆಯಲ್ಲಿ ಕಾಣಿಸಿಕೊಂಡಿರುವ ಯತ್ನಾಳ್, ಸಿಎಂ ಮತ್ತು ಅವರ ಪುತ್ರರು ಹಾಗೂ ನಿರಾಣಿ ಸೇರಿದಂತೆ ತಮ್ಮ ವಿರೋಧಿಗಳ ವಿರುದ್ಧ ಮತ್ತಷ್ಟು ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೆಹಲಿ ಭೇಟಿಯ ಹಿನ್ನೆಲೆಯಲ್ಲಿ ತಮ್ಮ ಕುರಿತ ವರದಿಗಳ ಹಿನ್ನೆಲೆಯಲ್ಲಿ ವಿಜಯೇಂದ್ರ ಇದ್ದಾರೆ. ತಮ್ಮ ಬಳಿ ಇರುವ ಸಾವಿರಾರು ಕೋಟಿ ಬಲದಲ್ಲಿ ಮಾಧ್ಯಮಗಳ ಮೂಲಕ ಹೀಗೆ ತಮ್ಮ ವಿರುದ್ಧ ವರದಿಗಳನ್ನು ಮಾಡಿಸಿದ್ದಾರೆ. ಆದರೆ, ನನಗೆ ವರಿಷ್ಟರು ಛೀಮಾರಿ ಹಾಕಲು ನಾನೇನು ಥರ್ಡ್ ರೇಟ್ ರಾಜಕಾರಣಿಯಲ್ಲ; ಸಿಡಿ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡಿಲ್ಲ, ಭ್ರಷ್ಟಾಚಾರ ಮಾಡಿಲ್ಲ, ಪಕ್ಷದ ವಿರುದ್ಧ ಮಾತನಾಡಿಲ್ಲ. ಕಾಂಗ್ರೆಸ್ ಬಿ ಟೀಮೂ ಅಲ್ಲ; ಯಾರಿಗೆ ಛೀಮಾರಿ ಹಾಕ್ತಾರೆ ಎನ್ನೋದು ಗೊತ್ತಾಗ್ತದೆ, ಸಿಡಿ ಹೊರಬರ್ತದೆ ಎಂದು ತಿರುಗೇಟು ನೀಡಿದ್ದಾರೆ.


ಅದೇ ವೇಳೆ, ಮಾಧ್ಯಮಗಳನ್ನು ಬಳಸಿಕೊಂಡು ಹಸೀಸುಳ್ಳುಗಳನ್ನು ಹಬ್ಬಿಸುವರರಿಗೆ ಛೀಮಾರಿ ಹಾಕುವ ದಿನಗಳು ದೂರವಿಲ್ಲ ಎಂದಿರುವ ಯತ್ನಾಳ್, ಇನ್ನೆರಡು ತಿಂಗಳಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂದಿದ್ದಾರೆ.


ಈ ನಡುವೆ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪಂಚಮಸಾಲಿ ಮೀಸಲಾತಿ ಹೋರಾಟದ ಪಕ್ಷದ ವರಿಷ್ಠರಿಗೆ ಯಾವ ಸಂದೇಶ ನೀಡಬೇಕಿತ್ತೋ ಅದನ್ನು ನೀಡಿದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂಬ ಮಾತುಗಳನ್ನೂ ಯತ್ನಾಳ್ ಆಡಿದ್ದಾರೆ. ಆ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಯತ್ನಾಳ್ ಅವರು ಸಿಎಂ ಮತ್ತು ಸಿಎಂ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳ ಕುರಿತು ಯಾವ ಕ್ರಮದ ಚಿಂತನೆಯಲ್ಲಿದ್ದಾರೆ ಮತ್ತು ಅವರ ಹಿಂದಿರುವ ಪಂಚಮಸಾಲಿ ಸಮುದಾಯದ ಮೀಸಲಾತಿ ಹಕ್ಕೊತ್ತಾಯದ ಕುರಿತ ಬಿಜೆಪಿ ಪಕ್ಷ ಮತ್ತು ಸರ್ಕಾರಗಳು ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತೂ ಗಂಭೀರ ಚರ್ಚೆಯಲ್ಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ.


ಅವರ ಆ ಮಾತುಗಳಿಗೆ ಪೂರಕವಾಗಿ, ಯತ್ನಾಳ್ ಅವರಿಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ನೀಡಿದ್ದ ನೋಟೀಸ್ ವಿಷಯ ಈಗಾಗಲೇ ತಣ್ಣಗಾಗಿದೆ. ಸ್ವತಃ ಮುಖ್ಯಮಂತ್ರಿಯ ವಿರುದ್ಧವೇ ಪಕ್ಷದ ಹಿರಿಯ ನಾಯಕರಾಗಿ ಯತ್ನಾಳ್ ಸಾರ್ವಜನಿಕವಾಗಿ ತೀವ್ರ ವಾಗ್ದಾಳಿ ನಡೆಸಿದ್ದರೂ, ಅಧಿಕಾರ ದುರುಪಯೋಗ, ಭ್ರಷ್ಟಾಚಾರದಂತಹ ಆರೋಪಗಳಿಗೆ ಆಧಾರಗಳನ್ನೂ ನೀಡುವುದಾಗಿ ಸವಾಲು ಹಾಕಿದ್ದಲ್ಲದೆ, ನಾಯಕತ್ವ ಬದಲಾವಣೆಯಾಗಲೇಬೇಕು ಎಂದು ನಿರಂತರವಾಗಿ ಆಗ್ರಹಿಸುತ್ತಲೇ ಇದ್ದಾರೆ. ಆದಾಗ್ಯೂ ಪಕ್ಷದ ಶಿಸ್ತು ಸಮಿತಿ ಯತ್ನಾಳ್ ಅವರಿಗೆ ಕೇವಲ ನೋಟೀಸ್ ನೀಡಿ ಮುಗುಮ್ಮಾಗಿದೆ ಎಂಬುದೇ ಹಲವು ಅರ್ಥಗಳನ್ನು ಹೊಮ್ಮಿಸುತ್ತಿದೆ. ಅದರಲ್ಲೂ ಪಕ್ಷದ ಸಂಘಪರಿವಾರ ಹಿನ್ನೆಲೆಯ ನಾಯಕರು ಮತ್ತು ಸಂಘಪರಿವಾರ ಈ ವಿಷಯದಲ್ಲಿ ಜಾಣ ಮೌನಕ್ಕೆ ಶರಣಾಗಿರುವುದು ಯತ್ನಾಳ್ ಎತ್ತಿರುವ ಪ್ರಶ್ನೆಗಳ ಕುರಿತು ಪಕ್ಷದ ವಲಯದಲ್ಲಿ ಇರಬಹುದಾದ ಸಹಮತಕ್ಕೆ ಸಾಕ್ಷಿಯೇ ಎಂಬ ಅನುಮಾನ ಕೂಡ ಗಟ್ಟಿಯಾಗಿದೆ.


ಈ ನಡುವೆ, ದೆಹಲಿಯಲ್ಲಿ ಯತ್ನಾಳ್ ಅವರಿಗೆ ಛೀಮಾರಿ ಹಾಕಲಾಗಿದೆ. ಅವರ ಬಾಯಿಗೆ ಬೀಗ ಬೀಳಲಿದೆ ಎಂಬ ಮಾಧ್ಯಮಗಳ ತಥಾಕಥಿಕ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವಂತೆ ಅವರು ಬೆಂಗಳೂರಿಗೆ ಬಂದವರೇ ತಮ್ಮ ವಾಗ್ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಹಿಂದಿಗಿಂತ ದುಪ್ಪಟ್ಟು ಹರಿತ ಅವರ ಮಾತುಗಳಿಗೆ ಬಂದಿದೆ. ಅಂದರೆ; ದೆಹಲಿ ಭೇಟಿಯ ಬಳಿಕ ಅವರಿಗೆ ಇನ್ನಷ್ಟು ಹುಮ್ಮಸ್ಸು ಬಂದಿದೆಯೇ? ಅವರೇ ಹೇಳಿಕೊಂಡಂತೆ ಇನ್ನೆರಡು ತಿಂಗಳಲ್ಲಿ ನಾಯಕತ್ವ ಬದಲಾವಣೆಯ ಸ್ಪಷ್ಟ ಸೂಚನೆ ದೆಹಲಿ ಭೇಟಿಯಲ್ಲಿ ಅವರಿಗೆ ಖಚಿತವಾಗಿದೆಯೇ? ಎಂಬ ಅನುಮಾನಗಳಿಗೆ ಮುಂದಿನ ದಿನಗಳು ಉತ್ತರ ಉತ್ತರಕೊಡಲಿವೆ.


ಅದೇ ವೇಳೆ, ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಾಚಾರ ಮತ್ತು ದುರಾಳಿತದಿಂದ ರಾಜ್ಯವನ್ನಷ್ಟೇ ಅಲ್ಲದೆ, ರಾಜ್ಯದಲ್ಲಿ ಪಕ್ಷವನ್ನೂ ಉಳಿಸುವ ನಿಟ್ಟಿನಲ್ಲಿ ನಾಯಕತ್ವ ಬದಲಾವಣೆಯಾಗಲೇ ಬೇಕು ಎಂಬ ಕೂಗು ಇನ್ನಷ್ಟು ಗಟ್ಟಿಯಾಗುತ್ತಿದ್ದು, ಮತ್ತೊಬ್ಬ ಪಂಚಮಸಾಲಿ ಪ್ರಭಾವಿ ನಾಯಕ ಹಾಗೂ ಶಾಸಕ ಅರವಿಂದ್ ಬೆಲ್ಲದ್ ಅವರೂ ಪಕ್ಷದ ವರಿಷ್ಠರಿಗೆ ರಾಜ್ಯದ ಬೆಳವಣಿಗೆಗಳ ಕುರಿತು ತಮ್ಮ ಅಹವಾಲು ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.


ಈ ನಡುವೆ, ಮತ್ತೊಂದು ಬೆಳವಣಿಗೆಯಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹಸ್ತಕ್ಷೇಪ ಮತ್ತು ಎಲ್ಲರ ಮೇಲೆ ಸವಾರಿ ಮಾಡುವ ವರಸೆಯಿಂದ ಬೇಸತ್ತಿರುವ ಕೆಲವು ಲಿಂಗಾಯತ ಸಚಿವರು ಮತ್ತು ಶಾಸಕರು ಕೂಡ ಪರೋಕ್ಷವಾಗಿ ಯತ್ನಾಳ್ ಮತ್ತು ಬೆಲ್ಲದ್ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅದರಲ್ಲೂ ಒಂದು ಕಾಲದ ಯಡಿಯೂರಪ್ಪ ಪರಮಾಪ್ತ ಹೊನ್ನಾಳಿಯ ರೇಣುಕಾಚಾರ್ಯರಂಥ ನಾಯಕರೇ, ಸರ್ಕಾರದಲ್ಲಿ ತಮ್ಮ ಮಾತು ನಡೆಯದ ಹಿನ್ನೆಲೆಯಲ್ಲಿ ತೀವ್ರ ನೊಂದುಕೊಂಡಿದ್ದು, ಪಕ್ಷ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಈ ಸರ್ಕಾರದಲ್ಲಿ ಮೂರು ಕಾಸಿನ ಬೆಲೆ ಇಲ್ಲದ ಮೇಲೆ ಇಂತಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು ಎಂದು ತಮ್ಮ ಆಪ್ತರ ಬಳಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಚಿವರೊಬ್ಬರ ವಿರುದ್ಧ ವ್ಯಕ್ತಪಡಿಸಿರುವ ಬಹಿರಂಗ ಅಸಮಾಧಾನ ಕೂಡ ವಾಸ್ತವವಾಗಿ ವಿಜಯೇಂದ್ರ ವಿರುದ್ಧದ ಆಕ್ರೋಶವೇ. ಆದರೆ, ನೇರವಾಗಿ ಸಿಎಂ ಪುತ್ರನ ಕೆಂಗಣ್ಣಿಗೆ ಗುರಿಯಾಗುವುದರ ಅಪಾಯ ಅರಿತಿರುವ ಅವರು, ಪರೋಕ್ಷವಾಗಿ ಬಂಡಾಯಗಾರರ ಬೆನ್ನು ಸವರುತ್ತಿದ್ದಾರೆ ಎಂಬುದು ಆಂತರಿಕ ಮೂಲಗಳೇ ಉಸುರುವ ಮಾಹಿತಿ!


ಹಾಗಾಗಿ, ಮುಖ್ಯಮಂತ್ರಿಗಳ ಜನ್ಮದಿನಾಚರಣೆಯ ಸಂಭ್ರಮೋತ್ಸವದ ನಡುವೆಯೇ, ನಾಯಕತ್ವ ಬದಲಾವಣೆಯ ಕೂಗು ಮತ್ತೊಮ್ಮೆ ಮೊಳಗಿದೆ. ಬಿಜೆಪಿಯ ವರಿಷ್ಠರ ಪಾಲಿಗೆ ದಿನದಿಂದ ದಿನಕ್ಕೆ ಕರ್ನಾಟಕದ ಸರ್ಕಾರ ಮತ್ತು ತಮ್ಮ ಪಕ್ಷದ ಆಂತರಿಕ ಬೇಗುದಿ ತಲೆನೋವಾಗುತ್ತಿದ್ದು, ಪಶ್ಚಿಮಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿಯುತ್ತಲೇ ಒಂದು ಗಟ್ಟಿ ನಿರ್ಧಾರ ಕೈಗೊಳ್ಳಲಿದ್ದಾರೆ. ಆ ಹಿನ್ನೆಲೆಯಲ್ಲಿಯೇ ಯತ್ನಾಳ್ ನಾಯಕತ್ವ ಬದಲಾವಣೆಗೆ ಎರಡು ತಿಂಗಳ ಹೊಸ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎನ್ನಲಾಗುತ್ತಿದೆ!


Comments