ಉಪಚುನಾವಣೆ ಕಣ ರಂಗೇರಿದ್ದು, ಹೊಸಕೋಟೆ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಭಾರಿ ಸವಾಲಾಗಿ ಪರಿಣಮಿಸಿದೆ.
ಹೊಸಕೋಟೆ ವಿಧಾಸಭಾ ಕ್ಷೇತ್ರ ಉಪಚುನಾವಣೆ ಬಿಜೆಪಿ ಟಿಕೆಟ್ ವಂಚಿತ ಶರತ್ ಬಚ್ಚೇಗೌಡ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವುದು ಬಿಜೆಪಿ ಭಾರಿ ಹಿನ್ನಡೆ ಉಂಟುಮಾಡಿದೆ. ಇದರ ಹಿಂದೆಯೇ ಈಗ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.
ತಮ್ಮ ಪುತ್ರ ಶರತ್ ಬಚ್ಚೇಗೌಡ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ, ತಮ್ಮ ಬಹುಕಾಲದ ಬದ್ಧ ವೈರಿ ಎಂ.ಟಿ.ಬಿ.ನಾಗರಾಜ್ ಗೆ ಟಿಕೆಟ್ ನೀಡಿರುವುದರಿಂದ ಕೆರಳಿರುವ ಬಿ.ಎನ್.ಬಚ್ಚೇಗೌಡ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿರುವ ಬಚ್ಚೇಗೌಡ
ಚಿಕ್ಕಬಳ್ಳಾಪುರದಲ್ಲಿ ಕಮಲ ಅರಳಿಸಿರುವ ಬಿ.ಎನ್.ಬಚ್ಚೇಗೌಡ
ಬಿ.ಎನ್.ಬಚ್ಚೇಗೌಡ ಅವರು ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಆದರೆ ತಮ್ಮ ಪುತ್ರನಿಗೆ ಬಿಜೆಪಿಯು ಟಿಕೆಟ್ ನಿರಾಕರಿಸಿದ ಕಾರಣ ಈಗ ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದಾರೆ ಎಂಬ ಸುದ್ದಿ ಕ್ಷೇತ್ರದಲ್ಲಿ ಬಲವಾಗಿ ಹರಿದಾಡುತ್ತಿದೆ.
ಬಿಜೆಪಿಗೆ ಎಚ್ಚರಿಕೆ ನೀಡಿರುವ ಬಿ.ಎನ್.ಬಚ್ಚೇಗೌಡ
ಶರತ್ ಅನ್ನು ಉಚ್ಛಾಟಿಸಿದರೆ ಸಂಸದ ಸ್ಥಾನಕ್ಕೆ ರಾಜೀನಾಮೆ?
ಬಿಜೆಪಿ ಆದೇಶ ಧಿಕ್ಕರಿಸಿ ಶರತ್ ಬಚ್ಚೇಗೌಡ ಚುನಾವಣೆ ಕಣಕ್ಕೆ ಇಳಿದಿರುವ ಕಾರಣಕ್ಕೆ ಶರತ್ ಬಚ್ಚೇಗೌಡ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಮಾಡಲಾಗಿದೆ. ಇದು ಬಿ.ಎನ್.ಬಚ್ಚೇಗೌಡ ಅವರನ್ನು ಕೆರಳಿಸಿದೆ. ಒಂದೊಮ್ಮೆ ಶರತ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದಲ್ಲಿ ತಾವು ಬಿಜೆಪಿ ಮತ್ತು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಚ್ಚೇಗೌಡ ಬಿಜೆಪಿಗೆ ಎಚ್ಚರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅಲ್ಪ ಮತಗಳ ಅಂತರದಲ್ಲಿ ಸೋತಿದ್ದ ಶರತ್ ಬಚ್ಚೇಗೌಡ
ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿರುವ ಎಂಟಿಬಿ ನಾಗರಾಜು
ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದ ಎಂ.ಟಿ.ಬಿ.ನಾಗರಾಜು ಅವರು ಹೊಸಕೋಟೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಕೈ ಹಿಡಿದಿದ್ದು, ಟಿಕೆಟ್ ಸಹ ಗಿಟ್ಟಿಸಿಕೊಂಡಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಟಿಬಿ ವಿರುದ್ಧ ಕಾದಾಡಿ ಏಳು ಸಾವಿರಗಳ ಅಲ್ಪ ಮತದಿಂದ ಸೋತಿದ್ದ ಶರತ್ ಬಚ್ಚೇಗೌಡ ಮತ್ತೊಮ್ಮೆ ಎಂಟಿಬಿ ಯನ್ನು ಚುನಾವಣೆಯಲ್ಲಿ ಎದುರಿಸಲು ಪಕ್ಷೇತರವಾಗಿ ಕಣಕ್ಕೆ ಇಳಿದಿದ್ದಾರೆ.
'ಮಗ ಮಾತು ಕೇಳುತ್ತಿಲ್ಲ' ಎಂದಿದ್ದರು ಬಚ್ಚೇಗೌಡ
ಮನವೊಲಿಸುವ ಪ್ರಯತ್ನ ಮಾಡಿದ್ದರು ಬಿ.ಎನ್.ಬಚ್ಚೇಗೌಡ
ಟಿಕೆಟ್ ವಿತರಣೆ ಪ್ರಕ್ರಿಯೆ ಆರಂಭವಾದಾಗ ಶರತ್ ಬಚ್ಚೇಗೌಡ ಅವರನ್ನು ಚುನಾವಣೆಗೆ ನಿಲ್ಲದಂತೆ ಮನವೊಲಿಸುವ ಪ್ರಯತ್ನ ಮಾಡಿದ್ದಾಗಿ ಹೇಳಿದ್ದ ಬಿ.ಎನ್.ಬಚ್ಚೇಗೌಡ, 'ನನ್ನ ಮಗ ಶರತ್ ಬಚ್ಚೇಗೌಡ ನನ್ನ ಮಾತು ಕೇಳುತ್ತಿಲ್ಲ' ಎಂದು ಯಡಿಯೂರಪ್ಪ ಅವರಿಗೆ ತಿಳಿಸಿದ್ದರು. ಅಂತೆಯೇ ಶರತ್ ಬಚ್ಚೇಗೌಡ ನಾಮಪತ್ರ ಸಲ್ಲಿಸುವಾಗಲೂ ಬಿ.ಎನ್.ಬಚ್ಚೇಗೌಡ ಹಾಜರಿರಲಿಲ್ಲ. ಇದರಿಂದಾಗಿ ಶರತ್ ಬಚ್ಚೇಗೌಡ ಅವರಿಗೆ ತಂದೆಯ ಬೆಂಬಲ ಇಲ್ಲ ಎಂದು ಎಣಿಸಲಾಗಿತ್ತು. ಆದರೆ ಈಗ ಏಕಾ-ಏಕಿ ತಮ್ಮ ಮಗನ ಪರವಾಗಿ ನಿಲ್ಲಲು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಣಯ ಮಾಡಿದ್ದಾರೆ.
ಬಹಿರಂಗವಾಗಿ ಎಲ್ಲಿಯೂ ಹೇಳಿಲ್ಲ ಬಚ್ಚೇಗೌಡರು
ಮಗನ ರಾಜಕೀಯ ಜೀವನ ನಿರ್ಮಾಣಕ್ಕೆ ನಿರ್ಧಾರ?
ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಬಿ.ಎನ್.ಬಚ್ಚೇಗೌಡ ಬಹಿರಂಗವಾಗಿ ಹೇಳಿಲ್ಲ. ಆದರೆ ಬಚ್ಚೇಗೌಡ ಅವರ ಕುಟುಂಬದ ಆಪ್ತರು, ಬೆಂಬಲಿಗರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ. 'ತಮ್ಮ ರಾಜಕೀಯ ಜೀವನ ಸಂಧ್ಯಾಕಾಲದಲ್ಲಿದ್ದು, ಮಗನ ರಾಜಕೀಯ ಜೀವನ ನಿರ್ಮಿಸುವ ಸಲುವಾಗಿ ಬಚ್ಚೇಗೌಡರು ಈ ನಿರ್ಣಯ ತಳೆಯಲಿದ್ದಾರೆ' ಎಂದು ಕ್ಷೇತ್ರದಲ್ಲಿ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿಯಿಂದಲೇ ಸಂಸದರಾಗಿ ಆಯ್ಕೆ ಆಗಿದ್ದಾರೆ
ಹೊಸಕೋಟೆಯಲ್ಲಿ ಬಿಜೆಪಿಗೆ ನೆಲೆ ತಂದುಕೊಟ್ಟಿದ್ದ ಬಚ್ಚೇಗೌಡ
ಹೊಸಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಅಸ್ಥಿತ್ವ ತಂದುಕೊಟ್ಟ ಶ್ರೇಯ ಬಿ.ಎನ್.ಬಚ್ಚೇಗೌಡ ಅವರಿಗೆ ಸಲ್ಲುತ್ತದೆ. ಬಿಜೆಪಿಯಿಂದಲೇ ಒಂದು ಶಾಸಕರಾಗಿ ಆಯ್ಕೆ ಆಗಿದ್ದ ಬಚ್ಚೇಗೌಡ, ಈಗ ಬಿಜೆಪಿಯಿಂದಲೇ ಸಂಸದರಾಗಿಯೂ ಆಯ್ಕೆಯಾಗಿ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಮಲ ಅರಳುವಂತೆ ಮಾಡಿದ್ದಾರೆ. ಆದರೆ ಅವರು ರಾಜೀನಾಮೆ ನೀಡಿದಲ್ಲಿ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರಭಾವಿ ಮುಖಂಡರೇ ಇಲ್ಲದಾಗುತ್ತದೆ. ಇದು ಬಿಜೆಪಿಗೆ ಆತಂಕ ತಂದಿದೆ.
Comments
Post a Comment